ಕೆಂಪೇಗೌಡರ ಅಭಿಮಾನಿಗಳು ಈಗ ಮಾತನಾಡಬೇಕಿದೆ. ಅಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ದೇವನಹಳ್ಳಿಯಲ್ಲೇ ಹುಟ್ಟಿ ಬೆಳೆದ ಟಿಪ್ಪು ಸುಲ್ತಾನ್ ಹೆಸರು ಸೂಕ್ತ ಎಂದು ಗಿರೀಶ್ ಕಾರ್ನಾಡ್ ಅಭಿಪ್ರಾಯ ವ್ಯಕ್ತಪಡಿಸಿದಾಗ ಗದ್ದಲ ಎಬ್ಬಿಸಿದವರೆಲ್ಲರೂ ಈಗ ಮಾತನಾಡಬೇಕಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು ಕೆಲವೇ ದಿನಗಳಲ್ಲಿ ಕೆಂಪೇಗೌಡ ಏರ್ ಪೋರ್ಟ್ ಎಂಬ ಬೋರ್ಡಿನ ಪಕ್ಕದಲ್ಲೇ ಅದಾನಿ ಏರ್ ಪೋರ್ಟ್ ಎಂಬ ಬೋರ್ಡ್ ಕಾಣಿಸಿಕೊಳ್ಳಲಿದೆ. ಇದು ಕೆಂಪೇಗೌಡರಿಗೆ ಮಾತ್ರವಲ್ಲದೆ ಇಡೀ ಕನ್ನಡಿಗರಿಗೆ ಮಾಡುವ ಅವಮಾನವಾಗಿದೆ.
ಬೆಂಗಳೂರು, ದೆಹಲಿ, ಮುಂಬೈ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿನ ತನ್ನ ಉಳಿಕೆ ಪಾಲಿನ ಷೇರನ್ನೂ ಮಾರಾಟ ಮಾಡಲು ಕೇಂದ್ರ ಸರ್ಕಾರ ಸಿದ್ದತೆ ಮಾಡಿಕೊಂಡಿದೆ. 2021-22ರ ಹಣಕಾಸು ವರ್ಷದಲ್ಲಿ ಆಸ್ತಿಗಳ ನಗದೀಕರಣದ ಮೂಲಕ 2.5 ಲಕ್ಷ ಕೋಟಿ ರೂ. ಸಂಗ್ರಹಣೆ ಸಂಬಂಧ ತನ್ನ ಪಾಲನ್ನು ಮಾರಾಟ ಮಾಡಲು ಸಿದ್ಧತೆ ನಡೆಸಿದೆ. ಹಾಗೇನಾದರೂ ಆದರೆ ಮಂಗಳೂರು ಏರ್ ಪೋರ್ಟ್ ನಂತೆ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ಏರ್ ಪೋರ್ಟ್ ಕೂಡಾ ಅದಾನಿ (ಅದಾನಿಯೇ ಷೇರು ಖರೀದಿಸಿದರೆ) ಏರ್ ಪೋರ್ಟ್ ಆಗಲಿದೆ.
ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ(ಎಎಐ) ಷೇರು ಹಿಂತೆಗೆತ ಸಂಬಂಧ ವಿಮಾನಯಾನ ಸಚಿವಾಲಯ ಅನುಮೋದನೆ ನೀಡಲಿದ್ದು, ಈ ವಿಷಯವು ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸರ್ಕಾರ ಶೇ.13 ಹಾಗೂ ದೆಹಲಿಯ ವಿಮಾನ ನಿಲ್ದಾಣದಲ್ಲಿ ಶೇ.26ರಷ್ಟು ಷೇರನ್ನು ಹೊಂದಿದೆ. ವಿಮಾನ ನಿಲ್ದಾಣಗಳ ಖಾಸಗೀಕರಣ ಪ್ರಕ್ರಿಯೆಗಳನ್ನು ಈಗಾಗಲೇ ಸಚಿವಾಲಯ ಆರಂಭಿಸಿದ್ದು, ಸಂಪುಟದ ಅಂಗೀಕಾರ, ವಿವಿಧ ಇಲಾಖೆಗಳ ಅನುಮೋದನೆ ಪಡೆಯುವ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ.
ಕೆಂಪೇಗೌಡರು ಕೇವಲ ಯಾವುದೋ ಒಂದು ಜಾತಿಗೆ ಸೀಮಿತರಾದವರಲ್ಲ. ಕೆಂಪೇಗೌಡ ಎಂದರೆ ಕನ್ನಡಿಗರ ಅಸ್ಮಿತೆಯ ಪ್ರಶ್ನೆ. ಬಹುಶಃ ನಾನು ಕೆಂಪೇಗೌಡರ ಅಭಿಮಾನಿ ಅಲ್ಲ ಎನ್ನುವ ಕನ್ನಡಿಗ ಕರ್ನಾಟಕದಲ್ಲಿ ಇರಲಿಕ್ಕಿಲ್ಲ. ಈಗ ಕೆಂಪೇಗೌಡ ಅಭಿಮಾನಿಗಳೆಲ್ಲರೂ ಬೆಂಗಳೂರು ವಿಮಾನ ನಿಲ್ದಾಣ ಖಾಸಗೀಕರಣದ ವಿರುದ್ದ ಹೋರಾಟ ಮಾಡಬೇಕಿದೆ.
ಖಾಸಗೀಕರಣವಾದರೂ ಕೆಂಪೇಗೌಡರ ಹೆಸರು ಹಾಗೇ ಉಳಿಯುತ್ತೆ, ಬೋರ್ಡ್ ಬದಲಾಯಿಸುವುದಿಲ್ಲ ಎಂಬಂತ ಹೇಳಿಕೆಗಳನ್ನು ಸರ್ಕಾರ ನೀಡಬಹುದು. ಕೇಂದ್ರ ಸರ್ಕಾರದ ಷೇರು ಇಲ್ಲವೆಂದ ಮೇಲೆ, ಸಂಪೂರ್ಣ ಮಾರಾಟ ಮಾಡಿದ ಮೇಲೆ ಅದು ಖಾಸಗಿಯಷ್ಟೆ. ಇಂದಲ್ಲ ನಾಳೆ ಕೆಂಪೇಗೌಡರ ಹೆಸರನ್ನು ಅಳಿಸಿ ಹಾಕುವುದಂತೂ ನಿಜ. ಜನರ ವಿರೋಧಕ್ಕೆ ಹೆದರಿ ಈಗ ಕೆಂಪೇಗೌಡ ಏರ್ ಪೋರ್ಟ್ ಎಂಬ ಬೋರ್ಡಿನ ಪಕ್ಕದಲ್ಲೇ ಅದಾನಿ ಏರ್ ಪೋರ್ಟ್ ಎಂಬ ಸಣ್ಣ ಬೋರ್ಡ್ ಹಾಕಬಹುದು. ಕಾಲಕ್ರಮೇಣ ಕೆಂಪೇಗೌಡ ಹೆಸರಿನ ಬೋರ್ಡ್ ಅನ್ನು ಕಿತ್ತು ಹಾಕುವುದಂತೂ ಸ್ಪಷ್ಟ. ಹಾಗಾಗಿ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗಿಕರಣವನ್ನೇ ಕನ್ನಡಿಗರು ವಿರೋಧಿಸಬೇಕಿದೆ.
- ನವೀನ್ ಸೂರಿಂಜೆ