ಚಿಕ್ಕಮಗಳೂರು: ಚಿನ್ನದ ವರ್ತಕನನ್ನು ಬೆದರಿಸಿ 10 ಲಕ್ಷ ರೂ. ನೀಡುವಂತೆ ಒತ್ತಾಯಿಸಿ ದರೋಡೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಅಜ್ಜಂಪುರ ಠಾಣಾಧಿಕಾರಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ದಾವಣಗೆರೆಯ ವರ್ತಕ ಭಗವಾನ್ ನೀಡಿರುವ ದೂರು ಆಧರಿಸಿ ಈ ಕ್ರಮ ಕೈಗೊಂಡಿದ್ದು ಅಜ್ಜಂಪುರ ಠಾಣಾಧಿಕಾರಿ ಲಿಂಗರಾಜು ಮುಖ್ಯ ಆರೋಪಿಯಾಗಿದ್ದಾರೆ.
ಸಕ್ಕರಾಯಪಟ್ಟಣದ ಧನಪಾಲ ನಾಯಕ್ ಕುದುರೆಮುಖದ ಓಂಕಾರ ಮೂರ್ತಿ ಲಿಂಗದಹಳ್ಳಿಯ ಶರತ್ ರಾಜ್ ಉಳಿದ ಆರೋಪಿಗಳು.
ದಾವಣಗೆರೆಯ ಚಿನ್ನದ ವರ್ತಕ ಭಗವಾನ್ ರವರ ಪುತ್ರ ರೋಹಿತ್ ಸುಮಾರು 2 ಕೆಜಿ ಚಿನ್ನದ ಆಭರಣಗಳನ್ನು ಬೇಲೂರಿನ ವರ್ತಕರು ಒಬ್ಬರಿಗೆ ನೀಡಲು ಕಾರಿನಲ್ಲಿ ಬರುತ್ತಿದ್ದಾಗ ಈ ಘಟನೆ ನಡೆದಿದೆ.
ರೋಹಿತ್ ಆಭರಣಗಳೊಂದಿಗೆ ಬರುತ್ತಿದ್ದ ಸಂದರ್ಭದಲ್ಲಿ ಬುಕ್ಕಾಂಬುದಿ ಗೇಟಿನ ಬಳಿ ಇಬ್ಬರು ಪೊಲೀಸರು ಕಾರನ್ನು ತಡೆದು ನಿಲ್ಲಿಸಿದ್ದಾರೆ.
ನೆರವಾಗಿ ಕಾರಿನ ಒಳಗೆ ಬಂದು ಕುಳಿತ ಪೊಲೀಸ್ ಸಿಬ್ಬಂದಿ, ಸ್ವಲ್ಪ ದೂರದಲ್ಲಿ ಠಾಣಾಧಿಕಾರಿ ಇದ್ದು ಅಲ್ಲಿಗೆ ಕರೆದುಕೊಂಡು ಹೋಗಿದ್ದಾರೆ.
ಅಲ್ಲಿ ರೋಹಿತ್ ಅನ್ನು ಬಲವಂತವಾಗಿ ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಿ 10 ಲಕ್ಷ ರೂ. ನೀಡುವಂತೆ ಬೇಡಿಕೆ ಸಲ್ಲಿಸಿದ್ದಾರೆ.
ತಪ್ಪಿದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುವ ಆರೋಪದ ಮೇಲೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ.
ತಾನು ಕಾನೂನು ಬದ್ಧವಾಗಿ ವ್ಯಾಪಾರ ಮಾಡುತ್ತಿದ್ದು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಿದರು ಬಿಡದೆ ಹಣಕ್ಕೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅಂತಿಮವಾಗಿ 5 ಲಕ್ಷ ರೂಗಳಿಗೆ ವ್ಯವಹಾರ ಕುದುರಿದ್ದು ರೋಹಿತ್ ಅಜ್ಜಂಪುರದಲ್ಲಿರುವ ವರ್ತಕರೊಬ್ಬರಿಂದ ಹಣವನ್ನು ಪಡೆದು ಇವರಿಗೆ ಸಂದಾಯ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರನ್ನು ಆಧರಿಸಿ ತನಿಖೆ ನಡೆಸಿ ಮೇಲ್ನೋಟಕ್ಕೆ ಆರೋಪ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ.
ಬೇಲಿಯೇ ಎದ್ದು ಹೊಲ ಮೇದಂತೆ ಆಗಿದ್ದು ಈ ಪ್ರಕರಣ ಇಡೀ ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಆಗಿದೆ.
** ಕುದುರೆಮುಖ ಠಾಣಾಧಿಕಾರಿಯೊಬ್ಬರು ಅಕ್ರಮವಾಗಿ ಚಹಾ ಪುಡಿ ಯನ್ನು ಸಾಗಿಸುತ್ತಿರುವ ದೃಶ್ಯವನ್ನು ದಾಖಲೆ ಸಮೇತ ಗ್ರಹ ಸಚಿವರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದೇ ಇಂಥ ಪ್ರಕರಣ ಮರುಕಳಿಸಲು ಕಾರಣ ಎಂದು ಪೊಲೀಸ್ ಇಲಾಖೆಯಲ್ಲಿಯೇ ಮಾತುಗಳು ಕೇಳಿ ಬರುತ್ತಿವೆ


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ