ಕಾಫಿಗೆ ಬೆಂಬಲ ಬೆಲೆ ಘೋಷಿಸುವ ಮೂಲಕ ಕೇರಳ ಸರ್ಕಾರ ಬೆಳೆಗಾರರ ಮನಗೆದ್ದಿದೆ .ಕೇರಳದ ವೈನಾಡಿನಲ್ಲಿ ರೋಬಸ್ಟಾ ಕಾಫಿ ಬೆಳೆಯುತ್ತಿದ್ದು ಸರ್ಕಾರದ ಕ್ರಮವನ್ನು ಬೆಳೆಗಾರರು ಸ್ವಾಗತಿಸಿದ್ದಾರೆ
ಏರುತ್ತಿರುವ ಉತ್ಪಾದನಾ ವೆಚ್ಚ, ಕಾಫಿ, ಕಾಳು ಮೆಣಸಿನ ಬೆಲೆ ಕುಸಿತ ಮತ್ತು ಪ್ರಾಕೃತಿಕ ವಿಕೋಪಗಳ ಕಾರಣದಿಂದ ದೇಶದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.
ಬೆಳೆಗಾರರ ಒತ್ತಾಯದ ನಡುವೆಯೂ ವಾಣಿಜ್ಯ ಬೆಳೆಯಾದ ಕಾಫಿಗೆ ಈವರೆಗೂ ಕೇಂದ್ರ ಅಥವಾ ರಾಜ್ಯ ಸರ್ಕಾರವು ಕನಿಷ್ಟ ಬೆಂಬಲ ಬೆಲೆಯನ್ನು ಘೋಷಿಸಿಲ್ಲ. ಪಕ್ಕದ ಕೇರಳ ರಾಜ್ಯವು ಕಾಫಿಗೆ ಬೆಂಬಲ ಬೆಲೆಯನ್ನು ಘೋಷಿಸಿದೆ.
ಕೇರಳ ಹಣಕಾಸು ಸಚಿವ ಟಿ.ಎಂ. ಥಾಮಸ್ ಐಸಾಕ್ ಶುಕ್ರವಾರ ತಮ್ಮ ಬಜೆಟ್ ಭಾಷಣದಲ್ಲಿ ಒಂದು ಕೆಜಿ ರೋಬಸ್ಟಾ ಚೆರಿ ಕಾಫಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) 90 ರೂಪಾಯಿಗೆ ಹೆಚ್ಚಿಸಿದ್ದಾರೆ. ಸರ್ಕಾರದ ನಿರ್ಧಾರವನ್ನು ಕಾಫಿ ಬೆಳೆಗಾರ ಸಂಘಟನೆಗಳು ಸ್ವಾಗತಿಸಿವೆ.
ಉತ್ಪಾದನಾ ವೆಚ್ಚ ಏರಿಕೆ ಆಗಿ ಜಿಲ್ಲೆಯ ಕಾಫಿ ಬೆಳೆಗಾರರು ತೀವ್ರ ಬಿಕ್ಕಟ್ಟಿನಲ್ಲಿರುವ ಈ ಸಮಯದಲ್ಲಿ, ನಾವು ಈ ಘೋಷಣೆಯನ್ನು ಸ್ವಾಗತಿಸುತ್ತೇವೆ ಎಂದು ವಯನಾಡ್ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಪ್ರಶಾಂತ್ ರಾಜೇಶ್ ತಿಳಿಸಿದ್ದಾರೆ.
ವಯನಾಡಿನಲ್ಲಿ ಶುಕ್ರವಾರ ರೊಬಸ್ಟಾ ಚೆರಿ ಬೆಲೆ ಕೆಜಿಗೆ 64 ರೂ ಆಗಿದ್ದು, ಕಳೆದ ವರ್ಷ ಕೆಜಿಗೆ ಇದೇ ಅವಧಿಯಲ್ಲಿ 72 ರೂಪಾಯಿಗಳಷ್ಟಿತ್ತು. ಎಂ ಎಸ್ ಸ್ವಾಮಿನಾಥನ್ ಆಯೋಗವೂ ಎಂಎಸ್ಪಿಯನ್ನು ಶಿಫಾರಸು ಮಾಡಿರಲಿಲ್ಲ. ವಯನಾಡ್ ನಲ್ಲಿ ವರ್ಷಕ್ಕೆ 90,000 ಟನ್ಗಿಂತಲೂ ಹೆಚ್ಚು ರೋಬಸ್ಟಾ ಚೆರ್ರಿ ಉತ್ಪಾದಿಸುತ್ತಿದೆ. ಇದರ ಜೊತೆಗೆ ಕೇರಳ ಸರ್ಕಾರ ಬ್ರಹ್ಮಗಿರಿ ಯೋಜನೆಯನ್ನು ಜಾರಿಗೆ ತಂದಿದ್ದು ಈ ಮೂಲಕ ಬೆಳೆಗಾರರಿಗೆ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಹಣಕಾಸಿನ ನೆರವು ನೀಡಲಿದೆ ಎಂದು ತಿಳಿಸಿದ್ದಾರೆ
ವಯನಾಡ್ ಕಾಫಿ ಬ್ರಾಂಡ್ ಹೆಸರಿನಲ್ಲಿ ಮೌಲ್ಯವರ್ಧಿತ ಕಾಫಿ ಉತ್ಪನ್ನಗಳನ್ನು ಮಾರಾಟ ಮಾಡಲು ಕುಡುಂಬಶ್ರೀ ಘಟಕಗಳ ಅಡಿಯಲ್ಲಿ ನೂರು ಕಿಯೋಸ್ಕ್ ಗಳನ್ನು ಮತ್ತು 500 ಕಾಫಿ ವೆಂಡಿಂಗ್ ಮೆಷೀನ್ ಗಳನ್ನು ಸ್ಥಾಪಿಸಲು ಸರ್ಕಾರ ಉದ್ದೇಶಿಸಿದ್ದು ವಯನಾಡಿನಲ್ಲಿ ಕಾಫಿ ಪಾರ್ಕ್ ಕೂಡ ಸ್ಥಾಪಿಸಲಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕಾಫಿ ಮಂಡಳಿ ಮಾಜಿ ಸದಸ್ಯ ಡಾ ಸಣ್ಣುವಂಡ ಕಾವೇರಪ್ಪ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ಧಾವಿಸಬೇಕಿದೆ. ಕಾಫಿಯಿಂದ ಸರ್ಕಾರ ಕೋಟಿಗಟ್ಟಲೆ ರೂ. ತೆರಿಗೆ ಸಂಗ್ರಹ ಮಾಡುತ್ತಿದ್ದರೂ ಆ ಬೆಳೆಗಾರರನ್ನು ಸಂಪೂರ್ಣ ನಿರ್ಲಕ್ಷಿಸಿವೆ ಎಂದು ದೂರಿದರು.
ಇಂದು ದೇಶದಲ್ಲಿ ಎಲ್ಲ ಬೆಳೆಗಳಿಗೂ ವಿಮೆ ಸೌಲಭ್ಯ ಇದೆ. ಕಾಫಿಗೆ ಮೂರು ವರ್ಷ ಮಾತ್ರ ಅಲ್ಪ ಸಮಯ ಬೆಳೆ ವಿಮೆ ಸೌಲಭ್ಯ ನೀಡಿ ನಂತರ ನಿಲ್ಲಿಸಲಾಗಿದೆ . ಸರ್ಕಾರ ಕಮಾಡಿಟಿ ಬೋರ್ಡ್ ಸ್ಥಾಪಿಸಿ ಬೆಳೆಗಾರರ ನೆರವಿಗೆ ಮುಂದಾಗಲಿ ಎಂದು ಒತ್ತಾಯಿಸಿದ್ದಾರೆ.ಆದರೆ ಏನೇ ಆದರೂ ಯಾವುದೇ ಸರ್ಕಾರವೂ ಈ ರೀತಿ ಬೆಳೆಗಾರನಿಗೆ ನೆರವಿನ ಹಸ್ತ ಚಾಚಿಲ್ಲ.
ಕೇರಳ ಸರ್ಕಾರದ ವ್ಯತ್ಯಾಸ ಸ್ವಾಗತಿಸಿರುವ ಬಿಳಿಗೇರಿಯ ಕಾಫಿ ಬೆಳೆಗಾರ ಎಂ ಏ ಶ್ಯಾಮ್ ಪ್ರಸಾದ್ ಕರ್ನಾಟಕ ಸರ್ಕಾರವೂ ಇದೇ ಮಾದರಿ ಅನುಸರಿಸಲಿ ಎಂದು ಒತ್ತಾಯಿಸಿದ್ದಾರೆ .
ಈ ಮಧ್ಯೆ ಕೇರಳದಲ್ಲಿ ಮುಂದಿನ ಮೇ ತಿಂಗಳಿನಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದ್ದು ಆ ಹಿನ್ನೆಲೆಯಲ್ಲಿ ಸರ್ಕಾರ ಎಂಎಸ್ಪಿ ಘೋಷಿಸಿದೆ ಎನ್ನಲಾಗಿದ್ದು ಎಂಎಸ್ಪಿ ಅಡಿಯಲ್ಲಿ ಬೆಳೆಗಾರನ ಪೂರ್ಣ ಉತ್ಪನ್ನವನ್ನೂ ಖರೀದಿಸುವುದಿಲ್ಲ. ಬದಲಿಗೆ ಪ್ರತಿಯೊಬ್ಬ ಬೆಳೆಗಾರನಿಂದಲೂ ಸೀಮಿತ ಪ್ರಮಾಣದ ಕಾಫಿ ಖರೀದಿಸಲಿದೆ ಎಂದೂ ಹೇಳಲಾಗುತ್ತಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ.
##ಕರ್ನಾಟಕ ಸರ್ಕಾರ
#ಕರ್ನಾಟಕ ಬೆಳೆಗಾರರ ಒಕ್ಕೂಟ
##ಕಾಫಿ ಮಂಡಳಿ ##ಶೋಭಾ ಕರಂದ್ಲಾಜೆ