ಚಿಕ್ಕಮಗಳೂರು :1978 .ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಹೆಸರು ದೇಶವಿದೇಶಗಳಲ್ಲಿ ಮನ್ನಣೆ ಪಡೆದಿತ್ತು .
ಕಾರಣ ;ತುರ್ತು ಪರಿಸ್ಥಿತಿಯ ಬಳಿಕ ಸೋತು ಸುಣ್ಣವಾಗಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಸ್ಪರ್ಧೆ . ಗೆಲುವು ಸಾಧಿಸಿ ರಾಜಕೀಯ ಪುನರ್ಜನ್ಮ ಪಡೆದಿದ್ದರು .
ಈಗ ಮತ್ತೊಮ್ಮೆ ಚಿಕ್ಕಮಗಳೂರು ಜಿಲ್ಲೆಯ ಹಿರಿಮೆಯ ಕಿರೀಟಕ್ಕೆ ಮತ್ತೊಂದು ಗರಿ ಮೂಡಿದೆ .
ಇದು ರಾಜಕೀಯ ಕಾರಣಕ್ಕಾಗಿ ಅಲ್ಲ ; ಮಾನವೀಯ -ಹೃದಯಸ್ಪರ್ಶಿ ಭಾವಕ್ಕಾಗಿ .
ಚಿಕ್ಕಮಗಳೂರು ನಗರದ ಬಸವನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ರಕ್ಷಿತಾಳ ಪಾಲಿಗೆ ಸೆ.18 ಕರಾಳ ದಿನ .
ಎಐಟಿ ವೃತ್ತದ ಸಮೀಪ ಬಸ್ಸಿನಿಂದ ಇಳಿಯುವಾಗ ಆಯತಪ್ಪಿ ಬಿದ್ದು ತೀವ್ರ ಗಾಯಗೊಂಡಿದ್ದ ಆಕೆಯನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ದೃಢಪಡಿಸಿದ ಬಳಿಕ ಚಿಕ್ಕಮಗಳೂರು ಆಸ್ಪತ್ರೆಗೆ ಕರೆತರಲಾಯಿತು .
ಮನವೊಲಿಕೆ - ದಿಟ್ಟ ನಿರ್ಧಾರ :ಕಡೂರು ತಾಲ್ಲೂಕಿನ ಸೋಮನಹಳ್ಳಿ ತಾಂಡ್ಯದ ಶೇಖರ್ ನಾಯ್ಕ್ ಮತ್ತು ಲಕ್ಷ್ಮಿ ದಂಪತಿ ಪುತ್ರಿ ರಕ್ಷಿತಾ. ನೂರಾರು ಕನಸುಗಳನ್ನು ಹೊತ್ತ ಬಾಲೆ.
ಮಗಳ ಸ್ಥಿತಿಯನ್ನು ಕಂಡು ಮುಂದೇನು ಎಂಬ ಚಿಂತೆಯಲ್ಲಿ ಇದ್ದ ಈ ಕುಟುಂಬವನ್ನು ಸಂಪರ್ಕಿಸಿದ ಜಿಲ್ಲಾಡಳಿತ ಮಗಳ ಅಂಗಾಂಗ ದಾನ ಮಾಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಯಿತು .
ನೋವು ದುಃಖದ ಮಧ್ಯೆಯೂ ಮಗಳ ಅಂಗಾಂಗ ದಾನಕ್ಕೆ ಸಮ್ಮತಿಸುವ ಮೂಲಕ ಈ ಕುಟುಂಬ ಆದರ್ಶ - ಮಾನವೀಯತೆಗೆ ನೈಜ ಅರ್ಥ ತುಂಬಿತು. ಎತ್ತರದ ಸ್ಥಾನದಲ್ಲಿ ನಿಂತಿತು .
ಚಿಕ್ಕಮಗಳೂರು ಜಿಲ್ಲಾ ಕೇಂದ್ರದ ಅರಳಗುಪ್ಪೆ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ .ಸಿ. ಮೋಹನ್ ಕುಮಾರ್ ತಂಡ ಅಂಗಾಂಗ ತೆಗೆಯುವ ಪ್ರಕ್ರಿಯೆಗೆ ಆಸ್ಪತ್ರೆಯನ್ನು ಸಜ್ಜುಗೊಳಿಸಿತು .
ಜಿಲ್ಲಾ ಆಸ್ಪತ್ರೆಯ ಡಾಕ್ಟರ್ ಚಂದ್ರಶೇಖರ ಸಾಲಿಮಠ, ಪ್ರಶಾಂತ್ ,ನಾಗೇಶ್ ಮತ್ತು ಆಸ್ಪತ್ರೆ ಸಿಬ್ಬಂದಿ ವರ್ಗ ಸಿಕ್ಕ ಅವಕಾಶವನ್ನು ಸವಾಲಾಗಿ ಸ್ವೀಕರಿಸಿತು .
ಮಣಿಪಾಲ ಮತ್ತು ಕೆಎಂಸಿಯಿಂದ ಬಂದಿದ್ದ ವೈದ್ಯರ ಸಮ್ಮುಖದಲ್ಲಿ ಎಲ್ಲಾ ಪ್ರಕ್ರಿಯೆಗಳು ಸಾಂಗವಾಗಿ ನಡೆಯುವ ಮೂಲಕ ಇಷ್ಟೊಂದು ಅಂಗಾಂಗ ತೆಗೆಯುವ ಈ ಪ್ರಕ್ರಿಯೆ ನಡೆಸಿದ "ರಾಜ್ಯದ ಪ್ರಥಮ ಜಿಲ್ಲಾ ಆಸ್ಪತ್ರೆ "ಎಂಬ ಹೆಗ್ಗಳಿಕೆಗೆ ಭಾಜನವಾಯಿತು . "ದಾಖಲೆ" ಬರೆಯಿತು .
9 ಜನರ ಬಾಳಿಗೆ ಆಸರೆ :ರಕ್ಷಿತಾಳಿಂದ ಪಡೆದ ಹೃದಯ, ನೇತ್ರ, ಮೂತ್ರಕೋಶ, ಯಕೃತ್ತು 9 ಜನರಿಗೆ ಜೋಡಿಸುವ ಮೂಲಕ ಆಕೆ ಇನ್ನೊಬ್ಬರ ಬಾಳಿಗೆ ಬದುಕು - ಬೆಳಕು ನೀಡಿದಳು.ಸಾವಿನಲ್ಲೂ ಸಾರ್ಥಕತೆ ಮೆರೆದ ಹೆಗ್ಗಳಿಕೆಗೆ ಪಾತ್ರವಾದಳು.
ಆಸ್ಪತ್ರೆಯಿಂದ ಅಂಗಾಂಗಗಳನ್ನು ವಿಶೇಷ ಹೆಲಿಕಾಪ್ಟರ್ - ಆ್ಯಂಬುಲೆನ್ಸ್ ಮೂಲಕ ಬೆಂಗಳೂರು - ಮಂಗಳೂರಿಗೆ ರವಾನಿಸುವ ಸನ್ನಿವೇಶಕ್ಕೆ ಮಡುಗಟ್ಟಿದ ಶೋಕದ ಮಧ್ಯೆ ನೂರಾರು ಜನ ಸಾಕ್ಷಿಯಾದರು .
ಬಿಕ್ಕಿ ಬಿಕ್ಕಿ ಅತ್ತರು : ಅಂಗಾಂಗದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮೃತ ದೇಹವನ್ನು ಪೋಷಕರಿಗೆ ಒಪ್ಪಿಸಲಾಯಿತು .
ಬಸವನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಸಹಪಾಠಿಗಳು ಬಿಕ್ಕಿ ಬಿಕ್ಕಿ ಅತ್ತರು .ಹೃದಯಸ್ಪರ್ಶಿ ಅಂತಿಮ ನಮನ ಸಲ್ಲಿಸಿದರು .
ಹುಟ್ಟೂರಿನಲ್ಲಿಯೂ ಭಾವಪೂರ್ಣ ವಿದಾಯ.ನೂರಾರು ಜನರಿಂದ ಅಂತಿಮ ನಮನದ ಬಳಿಕ ಅಂತ್ಯಸಂಸ್ಕಾರ ನಡೆಯಿತು.
ಅಭಿನಂದನೆಗಳ ಮಹಾಪೂರ :ಈಗ ಎಲ್ಲರ ಬಾಯಲ್ಲೂ ಶೇಖರ್ ನಾಯ್ಕ್ ಮತ್ತು ಲಕ್ಷ್ಮೀ ಬಾಯಿ ದಂಪತಿಗಳದ್ದೇ ಮಾತು .ಅವರ ಗಟ್ಟಿ ನಿರ್ಧಾರಕ್ಕೆ ಅಭಿನಂದನೆಗಳ ಮಹಾಪೂರ .ಜಿಲ್ಲಾ ಆಸ್ಪತ್ರೆ ವೈದ್ಯರ ಸಾಧನೆ ಬಗ್ಗೆಯೂ ಮನಃಪೂರ್ವಕ ಮೆಚ್ಚುಗೆ .
ಅಮಾನತು -ಪರಿಹಾರ : ಕರ್ತವ್ಯಲೋಪದ ಆರೋಪದ ಮೇಲೆ ಬಸ್ ಚಾಲಕ ಹಾಗೂ ನಿರ್ವಾಹಕರನ್ನು ಅಮಾನತುಪಡಿಸಲಾಗಿದೆ .ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 3 ಲಕ್ಷ ರೂ ಪರಿಹಾರ ಪ್ರಕಟಿಸಿದೆ .
ರಾಜ್ಯ ಸರ್ಕಾರ 6 ಲಕ್ಷ ರೂ ಹಾಗೂ ತಾಂಡಾ ಅಭಿವೃದ್ಧಿ ನಿಗಮದಿಂದ 1ಲಕ್ಷ ರೂ , ಕೌಶಲ್ಯ ಅಭಿವೃದ್ಧಿ ಯೋಜನೆಯಡಿ 2 ಲಕ್ಷ ರೂ.ನೀಡಲು ನಿರ್ಧರಿಸಲಾಗಿದೆ .
ಈ ಕುಟುಂಬದ ಬದುಕಿಗೆ ಆಸರೆ ದೊರಕಿಸಲು ಉದ್ಯೋಗ , ಇನ್ನಷ್ಟು ಆರ್ಥಿಕ ನೆರವು ಕಲ್ಪಿಸುವ ಬೇಕೆಂಬ ಒತ್ತಾಯ ಕೇಳಿಬಂದಿದೆ .
ಬರೆಹ :ದಿನೇಶ್ ಪಟವರ್ಧನ್