ಗಂಧ ಕಳ್ಳತನದ ಆರೋಪದ ಮೇಲೆ ಬಂಧಿತ ವ್ಯಕ್ತಿಯೋರ್ವ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದು ಅರಣ್ಯ ಇಲಾಖೆ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದಾರೆ .
ತಾಲ್ಲೂಕಿನ ಹೊಸಪೇಟೆ ಸಮೀಪದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ .ಶಿವಮೊಗ್ಗದಿಂದ ಐವರು ಗಂಧ ಕಳ್ಳತನ ಮಾಡಲು ಈ ಭಾಗಕ್ಕೆ ಬಂದಿದ್ದರು ಎನ್ನಲಾಗಿದೆ .
ಮಾಹಿತಿ ತಿಳಿದ ಅರಣ್ಯ ಸಿಬ್ಬಂದಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದು ಮೂವರು ಪರಾರಿಯಾಗಿದ್ದಾರೆ .
ಬಂಧಿತರಲ್ಲಿ ರವಿ ಎಂಬಾತನ ಶವ ಆನೆ ಶಿಬಿರದ ಬಳಿಯ ಶೌಚಾಲಯದಲ್ಲಿ ಪತ್ತೆಯಾಗಿದ್ದು ಇದು ಕೊಲೆ ಎಂದು ಸಾರ್ವಜನಿಕರು ಸಂಶಯ ಹೊರಹಾಕಿದ್ದಾರೆ .
ಗಂಧ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಿದ್ದು ,ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟಿದ್ದಾನೆ ಎನ್ನುವ ಸಬೂಬು ಅರಣ್ಯ ಇಲಾಖೆಯದ್ದಾಗಿದೆ .
ಇಂದು ಬೆಳಿಗ್ಗೆ ಸ್ಥಳಕ್ಕೆ ಆ್ಯಂಬುಲೆನ್ಸ್ ಕರೆಸಿದ್ದು 'ವ್ಯಕ್ತಿ ಮೃತಪಟ್ಟಿರುವುದು ದೃಢವಾಗುತ್ತಿದ್ದಂತೆ ಶವ ತೆಗೆದುಕೊಂಡು ಹೋಗಲು ನಿರಾಕರಿಸಿ ಆ್ಯಂಬ್ಯುಲೆನ್ಸ್ ಹಿಂದೆ ಬಂದಿದೆ .
ಹೊತ್ತು ಸರಿದಂತೆ ವಿಷಯ ಬಹಿರಂಗಗೊಂಡು ಸ್ಥಳದಲ್ಲಿ ಜಮಾಯಿಸಿದ ಜನ ಅರಣ್ಯ ಇಲಾಖೆ ವಿರುದ್ಧ ಕೊಲೆ ಆರೋಪವನ್ನು ಹೊರೆಸಿ ತೀವ್ರ ಆಕ್ರೋಶ ಹೊರ ಹಾಕಿದೆ.
ವ್ಯಕ್ತಿ ಸಾವಿಗೆ ಕಾರಣವಾಗಿರುವ ಓರ್ವ ಅರಣ್ಯಾಧಿಕಾರಿ ಮತ್ತು ಇಬ್ಬರು ಸಿಬ್ಬಂದಿಯನ್ನು ತಕ್ಷಣ ವಜಾ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ಮಾಡಿ ಅರಣ್ಯ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ .
ಪರಿಸ್ಥಿತಿಯನ್ನು ನಿಭಾಯಿಸಲು ಅರಣ್ಯ ಮತ್ತು ಪೊಲೀಸ್ ಇಲಾಖೆ ಹರಸಾಹಸ ಪಟ್ಟಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಸಮಜಾಯಿಷಿಯನ್ನು ಒಪ್ಪದ ಜನ ಇದೊಂದು ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ .
ಬಂಧಿತ ವ್ಯಕ್ತಿಯನ್ನು ತೀವ್ರವಾಗಿ ಥಳಿಸಿದ್ದು, ಆತನ ಕೈ ಕಾಲುಗಳು ಊದಿದ್ದು ಅರಣ್ಯ ಇಲಾಖೆ ಸಿಬ್ಬಂದಿ ದೌರ್ಜನ್ಯವೇ ವ್ಯಕ್ತಿ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ .ತಪ್ಪನ್ನು ಮುಚ್ಚಿಕೊಳ್ಳಲು ಅರಣ್ಯ ಇಲಾಖೆ ಯತ್ನಿಸುತ್ತಿದೆ ಎಂಬ ಟೀಕೆಯೂ ವ್ಯಕ್ತವಾಗಿದೆ
ಸಂಜೆ ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದು ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಜನ ಪಟ್ಟು ಹಿಡಿದಿದ್ದಾರೆ .
ಗಂಧ ಕಳ್ಳತನ ಆರೋಪ ಹೊರೆಸಿರುವ ಅರಣ್ಯ ಇಲಾಖೆಗೆ ವಶಪಡಿಸಿ ಕೊಂಡಿರುವ ಗಂಧವನ್ನು ತೋರಿಸಲು ಸಾಧ್ಯವಾಗಿಲ್ಲ. ಮೇಲ್ನೋಟಕ್ಕೆ ಇದೊಂದು ಕೊಲೆ ಎನ್ನುವ ಶಂಕೆ ವ್ಯಕ್ತವಾಗಿದ್ದು ಮರಣೋತ್ತರ ಪರೀಕ್ಷೆಯಿಂದ ಸತ್ಯ ಹೊರ ಬರಬೇಕಾಗಿದೆ .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ