(ಅದೇ ಊರಿನ, ಅದೇ ನದಿಯ ಹಳೇ ದುರಂತದ ನೆನಪು.)ಗುಜರಾತ್‌ನ ಮಚ್ಚೂ ನದಿಗೆ ಮೋರ್ಬಿ ಪಟ್ಟಣದ ಬಳಿ ಕಟ್ಟಿದ್ದ ತೂಗು ಸೇತುವೆ ಹರಿದು ಬಿದ್ದು 60ಕ್ಕೂ ಹೆಚ್ಚು ಜನರು ನಿಧನರಾದ ಸುದ್ದಿ ಈಗ ತಾನೇ ಬರುತ್ತಿದೆ. ಈ ತೂಗು ಸೇತುವೆ ನೂರು ವರ್ಷಗಳ ಹಿಂದೆ ಕಟ್ಟಲಾಗಿದ್ದು ಮತ್ತೆ ಮತ್ತೆ ಇದರ ರಿಪೇರಿ ಆಗಿತ್ತು. ಕಳೆದ ಏಳು ತಿಂಗಳಿಂದ ದುರಸ್ತಿ ಕೆಲಸ ನಡೆದು, ಕೇವಲ ಐದು ದಿನಗಳ ಹಿಂದಷ್ಟೇ ಜನರ ಓಡಾಟಕ್ಕೆ ಅದನ್ನು ತೆರೆಯಲಾಗಿತ್ತು. ನನ್ನ ನೆನಪು 45 ವರ್ಷಗಳ ಹಿಂದಕ್ಕೆ ಓಡುತ್ತದೆ. ನಾನು ಆಗ ನೈನಿತಾಲ್‌ನಲ್ಲಿ ಹೊಸದಾಗಿ ಪರಿಸರ ಉಪನ್ಯಾಸಕನಾಗಿ ನೇಮಕಗೊಂಡಿದ್ದೆ. ಮೋರ್ವಿ ಡ್ಯಾಮ್ ಕುಸಿದು ಅದೆಷ್ಟೊ ಸಾವಿರ ಜನರು ನೀರುಪಾಲಾದ ಸುದ್ದಿ ಆಗ ನಿಧಾನಕ್ಕೆ ಹೊಮ್ಮತೊಡಗಿತ್ತು. ಪರಿಸರ ಪಠ್ಯಕ್ಕೆ ಸೇರ್ಪಡೆ ಮಾಡಲು ನನಗೆ ಪಾಠವೊಂದು ಸಿಕ್ಕಂತಾಗಿದ್ದರೂ ಹೆಚ್ಚಿನ ಮಾಹಿತಿಗಾಗಿ ಪರದಾಡುತ್ತಿದ್ದೆ. ಇಡೀ ದೇಶವೇ ಪರದಾಡುತ್ತಿತ್ತು ಅನ್ನಿ. ಸತ್ತವರು ಎಷ್ಟೆಂಬುದು ಆಗ ಗೊತ್ತಿರಲಿಲ್ಲ (ಈಗಲೂ ಖಚಿತವಿಲ್ಲ). ಏನಿಲ್ಲೆಂದರೂ 1800 ಜನರು, ಗರಿಷ್ಠ 25 ಸಾವಿರ ಜನರು ನೀರು ಪಾಲಾಗಿರಬೇಕೆಂದು ಅಂದಾಜು ಮಾಡಲಾಗಿದೆ. ಅದು, ಜಗತ್ತಿನ ಅತಿ ದೊಡ್ಡ ಡ್ಯಾಮ್ ಕುಸಿತದ ದುರಂತವೆಂದು ಗಿನ್ನೆಸ್ ದಾಖಲೆಯಲ್ಲೂ ಸ್ಥಾನ ಪಡೆದಿತ್ತು*.ಆಗಿದ್ದೇನೇಂದರೆ-ಇದೇ ಮಚ್ಚೂ ನದಿಗೆ ಮೋರ್ಬಿ ಪಟ್ಟಣದಿಂದ (ಆಗ ಅದಕ್ಕೆ ಮೋರ್ವಿ ಎನ್ನುತ್ತಿದ್ದರು) ಐದು ಕಿ.ಮೀ. ದೂರದಲ್ಲಿ ಒಂದು ಅಣೆಕಟ್ಟು ಕಟ್ಟಲಾಗಿತ್ತು. ನಾಲ್ಕು ಕಿಲೊಮೀಟರ್ ಉದ್ದದ ಆ ಕಟ್ಟೆಯನ್ನು ಹೆಚ್ಚಿನ ಪಾಲು ಮಣ್ಣಿನಿಂದಲೇ ಭರ್ತಿ ಮಾಡಲಾಗಿತ್ತು. 1979ರ ಆಗಸ್ಟ್ 11ರಂದು ಭಾರೀ ಅಂದರೆ ಭಾರೀ ಮಳೆ ಸುರಿಯಿತು. ಇಡೀ ವರ್ಷದಲ್ಲಿ ಸುರಿಯಬೇಕಿದ್ದ ಮಳೆ (20”) ಅಲ್ಲಿ ಕೇವಲ 16 ಗಂಟೆಗಳಲ್ಲಿ ಸುರಿದಿತ್ತು. ಅಣೆಕಟ್ಟೆಯ ಧಾರಣ ಸಾಮರ್ಥ್ಯಕ್ಕಿಂತ ಮೂರು ಪಟ್ಟು ಮಳೆನೀರು ಆ ಜಲಾಶಯಕ್ಕೆ ಹರಿದು ಬಂತು. ಅಣೆಕಟ್ಟೆ ಒಡೆಯಿತು. ಕಟ್ಟೆ ಒಡೆದ ಕೇವಲ ಇಪ್ಪತ್ತು ನಿಮಿಷಗಳಲ್ಲಿ, ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ, ಮೋರ್ಬಿ ಪಟ್ಟಣಕ್ಕೆ ನೀರು ನುಗ್ಗಿತು. ನದಿಯ ಪಾತ್ರ ಇದ್ದಕ್ಕಿದ್ದಂತೆ ಹತ್ತು ಮೀಟರ್ ಮೇಲಕ್ಕೇರಿತು. ನದಿಯ ದಡದಲ್ಲಿದ್ದ ಮನೆಗಳನ್ನೆಲ್ಲ ಕೊಚ್ಚಿಕೊಂಡು ಹೋಯಿತು. ಪಟ್ಟಣದ ಮಧ್ಯಭಾಗದಲ್ಲೂ ನಾಲ್ಕಾರು ಮೀಟರ್ ಎತ್ತರಕ್ಕೆ ನೀರು ತುಂಬಿಕೊಂಡಿತು.ತುರ್ತು ಸಂಪರ್ಕ ಸಾಧನವೆಂದರೆ ಆಗೆಲ್ಲ ಟೆಲಿಫೋನ್ ಲ್ಯಾಂಡ್‌ಲೈನ್ ತಾನೆ? ಅವೆಲ್ಲ ಕೈಕೊಟ್ಟವು. ಸುದ್ದಿ ಅಹ್ಮದಾಬಾದ್‌ಗೂ ತಲುಪಿರಲಿಲ್ಲ.ಆದರೆ ಅಮೆರಿಕದ ಉಪಗ್ರಹವೊಂದು (ನಿಂಬಸ್ ಇರಬೇಕು) ಈ ಚಿತ್ರವನ್ನು ಗ್ರಹಿಸಿ ದಿಲ್ಲಿಗೆ ತುರ್ತು ಸುದ್ದಿ ರವಾನಿಸಿತೆಂದೂ ಆ ನಂತರವೇ ಗುಜರಾತಿನ ರಾಜಧಾನಿಗೆ ಈ ದುರಂತದ ವಿಷಯ ಗೊತ್ತಾಗಿ ಪರಿಹಾರ ಮತ್ತು ರಕ್ಷಣೆಯ ಕೆಲಸ ಸಾಕಷ್ಟು ತಡವಾಗಿ ಆರಂಭವಾಗಿತ್ತು. “ಎಲ್ಲಿ ನೋಡಿದಲ್ಲಿ ಕೊಳೆತ ಹೆಣಗಳ, ಜಾನುವಾರುಗಳ ರಾಶಿ. ಮುಖಕ್ಕೆ ಬಟ್ಟೆ ಕಟ್ಟಿಕೊಂಡ ಭೂಸೇನೆಯ ಜವಾನರು ಶವಗಳನ್ನು ಎತ್ತಿ ಎತ್ತಿ ದಿಮ್ಮಿಗಳಂತೆ ಲಾರಿಗೆ ಬಿಸಾಕುತ್ತಿದ್ದರು; ಇಡೀ ಮೋರ್ವಿ ಪಟ್ಟಣವೇ ಮೌನದಲ್ಲಿ ಮುಳುಗಿತ್ತು” ಎಂದು ಒಂದು ವಾರದ ನಂತರ ಅಲ್ಲಿಗೆ ಹೋದ ʼಇಂಡಿಯಾ ಟುಡೇʼ ವರದಿಗಾರ ಸುನೀಲ್ ಸೇಠಿ ವರದಿ ಮಾಡಿದ್ದರು. 19ನೇ ತಾರೀಖಿನಂದು ಗುಜರಾತ್ ಮುಖ್ಯಮಂತ್ರಿ ಬಾಬೂಭಾಯಿ ಪಟೇಲ್ “ಇಂದು 1137 ಜನರ ಮತ್ತು 2919 ಜಾನುವಾರುಗಳ ಶವಗಳನ್ನು ದಫನ ಮಾಡಲಾಯಿತು” ಎಂದು ಯಾಂತ್ರಿಕವಾಗಿ ಅಂಕಿಸಂಖ್ಯೆಗಳನ್ನು ಪಠಿಸುತ್ತಿದ್ದರು. ದುರಂತವನ್ನು ಕಣ್ಣಾರೆ ನೋಡಲು ಬಂದ ಗಣ್ಯರೇ ಪರಿಹಾರ ಕಾರ್ಯಕ್ಕೆ ದೊಡ್ಡ ಅಡೆತಡೆಯಾಗಿದ್ದರು. ಆಡಳಿತ ಯಂತ್ರವೆಲ್ಲ ಗಣ್ಯರ ಅನುಕೂಲಕ್ಕಾಗಿ ಶ್ರಮಿಸುತ್ತಿತ್ತು. ಆಗಸ್ಟ್ 16ರ ಒಂದೇ ದಿನ, “ಶ್ರೀಮತಿ ಇಂದಿರಾ ಗಾಂಧಿಯವರೂ ಸೇರಿದಂತೆ 21 ಗಣ್ಯರು ಮೋರ್ಬಿಗೆ ಬಂದಿದ್ದರು” – ಹೀಗೆಂದು ಸೇಠಿ ವರದಿ ಮಾಡಿದ್ದರು. ಅವರ ಆಗಿನ ಅಂದಾಜಿನ ಪ್ರಕಾರ 4ರಿಂದ 5 ಸಾವಿರ ಜನರು ಆ ದುರ್ಘಟನೆಯಲ್ಲಿ ಗತಿಸಿದ್ದರು.(ಮೋರ್ಬಿ ಬೇರೆ, ಮೋರ್ವಿ ಬೇರೆ ಇದ್ದೀತೆ ಎಂದು ಮತ್ತೆ ಮತ್ತೆ ಚೆಕ್ ಮಾಡಿದೆ. ಅದೇ ಮಚ್ಚೂ ನದಿ, ಅದೇ ಮೋರ್ವಿ ಪಟ್ಟಣ ಇದು.) .......*ಗಿನ್ನೆಸ್ ರೆಕಾರ್ಡ್‌ನಲ್ಲಿ ಮೋರ್ವಿ ಅಣೆಕಟ್ಟೆಯ ದುರಂತದ ದಾಖಲೆಯನ್ನು ಅಳಿಸಲಾಗಿದೆ. ಏಕೆಂದರೆ ಇದಕ್ಕಿಂತ ದೊಡ್ಡ ದುರಂತ ಚೀನಾದ ಹೆನಾನ್ ಪ್ರಾಂತದ ರೂʼ ನದಿಗೆ ನಿರ್ಮಿಸಲಾಗಿದ್ದ ಬಾನ್‌ಕ್ಯೂ ಅಣೆಕಟ್ಟು 1975ರಲ್ಲಿ ಕುಸಿದಾಗ ಸಂಭವಿಸಿತ್ತು. ಭಾರೀ ಸುಂಟರಗಾಳಿ ಮತ್ತು ಮಹಾಮಳೆಯಿಂದಾಗಿ ಕಟ್ಟೆ ಒಡೆದು ಸುಮಾರು 30 ಪಟ್ಟಣಗಳು ಕೊಚ್ಚಿ ಹೋದವು. ಸತ್ತವರ ಸಂಖ್ಯೆ ಅಂದಾಜು ಕನಿಷ್ಠ ಹತ್ತಾರು ಸಾವಿರ, ಗರಿಷ್ಠ 240 ಸಾವಿರ. ಚೀನಾ 30 ವರ್ಷಗಳ ನಂತರ ಈ ದುರಂತಕ್ಕೆ ಸಂಬಂಧಿಸಿದ ಕಡತಗಳನ್ನು ಬಹಿರಂಗಪಡಿಸಿದೆ.ಅಂದಹಾಗೆ, ಈ ದಿನ ಇನ್ನೂ ಬಿಬಿಸಿ, ಸಿಎನ್‌ಎನ್‌ಗಳು ಮೋರ್ಬಿಗೆ ತಲುಪಿದಂತಿಲ್ಲ. ಅವರ ಗಮನವೆಲ್ಲ ದಕ್ಷಿಣ ಕೊರಿಯಾ ರಾಜಧಾನಿ ಸೋಲ್‌ನಲ್ಲಿ ಸಂಭವಿಸಿದ ಕಾಲ್ತುಳಿತದ ದುರಂತಕ್ಕೆ ಸೀಮಿತವಾಗಿತ್ತು. ಅಲ್ಲಿ ಹ್ಯಾಲೊವೀನ್ ಸಂಭ್ರಮದ ಸಂದರ್ಭದಲ್ಲಿ ಕಿರಿದಾದ ಓಣಿಯಲ್ಲಿ ಎಲ್ಲರೂ ಓಡುತ್ತಿದ್ದಾಗ ಕಾಲ್ತುಳಿತಕ್ಕೆ 160 ಜನರು ಗತಿಸಿದ್ದಾರೆ. ಜಗತ್ತಿನ ದೊಡ್ಡ ದೊಡ್ಡ ಗಣ್ಯರೆಲ್ಲ ಸಂತಾಪ ಸೂಚಿಸುತ್ತಿದ್ದಾರೆ. ದಿಲ್ಲಿಯಲ್ಲೂ ಕೊರಿಯಾ ಧ್ವಜವನ್ನು ಅರ್ಧಕ್ಕೆ ಇಳಿಸಲಾಗಿದೆ.*ಈದಿನದ ಮೋರ್ಬಿ ಸೇತುವೆ ಕುಸಿತಕ್ಕೆ "ಛತ್ ಪೂಜಾ" ಸಂಭ್ರಮವೇ ಕಾರಣವೆಂದು ಹೇಳಲಾಗುತ್ತಿದೆ. ಮಹಿಳೆಯರು ನದಿಗೆ ಹೋಗಿ ಸೂರ್ಯನಿಗೆ ಅರ್ಘ್ಯ ಕೊಡುವ ಈ ಛತ್ ಪೂಜಾ ಹಿಂದೆಲ್ಲ ಬಿಹಾರ ರಾಜ್ಯಕ್ಕಷ್ಟೇ ಸೀಮಿತವಾಗಿತ್ತು. ಇಂದು ಬೆಳಿಗ್ಗೆಯಷ್ಟೇ ಪ್ರದಾನಿ ಮೋದಿಯವರು ಸೂರ್ಯನ ಆರಾಧನೆಯ ಈ ಸಂಪ್ರದಾಯವನ್ನು ಹಾಡಿ ಹೊಗಳಿದ್ದರು. ಭಾರತದ ಈ ವಿರಾಸತ್ ಇಂದು ಇಡೀ ದೇಶಕ್ಕಷ್ಟೇ ಅಲ್ಲ, ಜಗತ್ತಿಗೇ ವ್ಯಾಪಿಸಿದೆ ಎಂದು ಬಣ್ಣಿಸಿದ್ದರು. ಈ ಹಬ್ಬಕ್ಕೆ ಅಷ್ಟೇನೂ ನೇರ ಸಂಬಂಧಿಸಿಲ್ಲವಾದರೂ (ಚುನಾವಣೆಗೆ ಸಂಬಂಧಿಸಿದ್ದರಿಂದ) ಗುಜರಾತ್ ಹೇಗೆ ಸೌರಶಕ್ತಿಯನ್ನು ಮನೆಮನೆಗೆ ತಲುಪಿಸುತ್ತಿದೆ ಎಂಬುದನ್ನು ತಮ್ಮ ಎಂದಿನ ಸಂಮೋಹಕ ಮಾತುಗಳಲ್ಲಿ ವಿವರಿಸಿದರು. ಅವರ ಮನ್‌ಕೀ ಬಾತ್ ಗೂ ಇಂದಿನ ದುರಂತಕ್ಕೂ ನೇರ ಸಂಬಂಧ ಇಲ್ಲ ನಿಜ. ಇದು ಸಾಂದರ್ಭಿಕ ಸಂಗತಿ ಅಷ್ಟೆ. ಕಾಕತಾಳೀಯ ಎನ್ನೋಣ ಬೇಕಿದ್ದರೆ.
(*ನಾಗೇಶ್ ಹೆಗಡೆಯವರ ವಾಲ್ ನಿಂದ )

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ