ಚಿಕ್ಕಮಗಳೂರು : ರಾಜಸ್ವ ಹಣ ದುರುಪಯೋಗ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಾಲ್ವರು ಉಪ ನೋಂದಣಾಧಿಕಾರಿಗಳು ಸೇರಿದಂತೆ 7ಜನರಿಗೆ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ
ಉಪನೋಂದಣಾಧಿಕಾರಿಗಳಿಗೆ ತಲಾ 4 ವರ್ಷ, ಮೂವರು ಪತ್ರ ಬರಹಗಾರರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 1.25 ಕೋಟಿ ದಂಡ ವಿಧಿಸಿ ಮಂಡ್ಯ 1ನೇ ಹೆಚ್ಚುವರಿ ಸಿವಿಲ್, ಜೆಎಂಎಫ್‌ಸಿ ನ್ಯಾಯಾಧೀಶರು ಮಹತ್ವದ ತೀರ್ಪು ನೀಡಿದ್ದಾರೆ.
2006ಕ್ಕೂ ಹಿಂದೆ ಮಂಡ್ಯ ನಗರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಉಪ ನೋಂದಾವಣಾಧಿಕಾರಿಗಳಾಗಿದ್ದ ಎಸ್.ಎನ್.ಪ್ರಭಾ, ಚಲುವರಾಜು, ಪ್ರಭಾರ ಉಪ ನೋಂದಣಾಧಿಕಾರಿಗಳಾಗಿದ್ದ ಲೀಲಾವತಿ, ಸುನಂದಾ ಹಾಗೂ ಪತ್ರ ಬರಹಗಾರರಾಗಿದ್ದ ಬಿ.ಕೆ.ರಾಮರಾವ್, ನರಸಿಂಹಮೂರ್ತಿ, ಚಂದ್ರಶೇಖರ್ ಶಿಕ್ಷೆಗೆ ಒಳಗಾದವರು.
ಒಟ್ಟು 154 ಪ್ರಕರಣಗಳಲ್ಲಿ ಹಣ ದುರುಪಯೋಗವಾಗಿರುವ ಬಗ್ಗೆ 2006ರಲ್ಲಿ ಉಪ ನೋಂದಣಾಧಿಕಾರಿಯಾಗಿದ್ದ ನರಸಿಂಹಯ್ಯ ಪಶ್ಚಿಮ ಠಾಣೆಗೆ ದೂರು ಸಲ್ಲಿಸಿದ್ದರು.
ಇದರ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ರಮೇಶ್ ಎಸ್ ಗಾಣಿಗೇರ್ ಮಹತ್ವದ ತೀರ್ಪು ನೀಡಿದ್ದಾರೆ.
ಎಸ್.ಎನ್.ಪ್ರಭಾ ಸದ್ಯ ಬೆಂಗಳೂರು ಐಜಿಆರ್ (ಇನ್‌ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್) ಕಛೇರಿಯಲ್ಲಿದ್ದಾರೆ. ಚೆಲುವರಾಜು ಶೃಂಗೇರಿ ಉಪ ನೋಂದಣಾಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ .
ಲೀಲಾವತಿ ಮದ್ದೂರು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಎಫ್‌ಡಿಎ, ಸುನಂದಾ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಎಫ್‌ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಅಭಿಯೋಜಕ ಎಂ. ಜಿ ಸುರೇಶ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಶೃಂಗೇರಿ ಉಪನೋಂದಣಾಧಿಕಾರಿ ಚಲುವರಾಜ್ ಇತ್ತೀಚೆಗೆ ಕಂದಾಯ ಸಚಿವ ಆರ್ ಅಶೋಕ್ ರವರ ಆಪ್ತ ಸಹಾಯಕರ ಮೇಲೆ ಲಂಚದ ಆರೋಪ ಹೊರಿಸಿ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ